ದಂಶಕಗಳು -
	ಸಸ್ತನಿ ವರ್ಗದ (ಮ್ಯಾಮೇಲಿಯ) ಅತ್ಯಂತ ದೊಡ್ಡ ಗಣ (ರಾಡೆಂಷಿಯ) ಅಳಿಲು, ಚಿಪ್‍ಮಂಕ್, ಕೇವಿಯ ಅಥವಾ ಗಿನಿಹಂದಿ, ಚಿಂಚಿಲ, ಸುಂಡಲಿ, ದೊಡ್ಡ ಇಲಿ, ಗೋಫರ್, ಬೀವರ್, ಕಸ್ತೂರಿ ಇಲಿ, ಕೊಯಿಪಸ್, ವೋಲ್, ಲೆಮಿಂಗ್, ಪಾಕೆಟ್ ಗೋಫರ್,  ಕಾಂಗರೂ ಇಲಿಗಳು, ಪಾಕೆಟ್ ಇಲಿ, ಹ್ಯಾಮ್‍ಸ್ಟರ್, ಜರ್‍ಬಿಲ್, ಮೋಲ್ ಇಲಿ, ಡಾರ್‍ಮೌಸ್, ಮುಳ್ಳುಹಂದಿ ಪಕಾಸ್, ಹ್ಯೂಟಯಾಸ್ ಮುಂತಾದ ವಿವಿಧ ಆಕಾರದ ಗಾತ್ರದ ಮತ್ತು ಸ್ವಭಾವದ ಪ್ರಾಣಿಗಳನ್ನು ಒಳಗೊಂಡಿದ್ದು ಸಸ್ತನಿ ವರ್ಗದಲ್ಲಿ ಬಹಳ ಪ್ರಮುಖಸ್ಥಾನವನ್ನು ಇದು ಪಡೆದುಕೊಂಡಿದೆ. ಈ ಗಣದಲ್ಲಿ 35 ಜೀವಂತ ಕುಟುಂಬಗಳೂ 8 ಅಳಿದುಹೋಗಿರುವ ಕುಟುಂಬಗಳೂ ಇವೆ.  ಬಹುಪಾಲು ದಂಶಕಗಳು ವಿಶೇಷವಾಗಿ ಬಿಲವಾಸಿಗಳು.  ಮಿಕ್ಕವು ಮರಗಳ ಮೇಲೆ ವಾಸಿಸುವವು.  ಕೆಲವು ಪ್ರಬೇದಗಳು ಭೂ ಹಾಗೂ ಜಲಜೀವನಕ್ಕೆ ಹೊಂದಿಕೊಂಡಿವೆ.  ಹೀಗಿದ್ದರೂ ದಂಶಕಗಳ ದೈಹಿಕ ಲಕ್ಷಣಗಳಲ್ಲಿ ಹೆಚ್ಚಿನ ವೈವಿದ್ಯವಿಲ್ಲದಿರುವುದು ಗಮನಾರ್ಹವಾದದು. ಇವುಗಳ ಹಲ್ಲುಗಳ ರಚನೆ ಮಾತ್ರ ವೈಶಿಷ್ಟ್ಯಪೂರ್ಣವಾಗಿವೆ. ನೀಳವಾಗಿ ಉಳಿಯಂತಿರುವ 4 ಬಾಚಿಹಲ್ಲುಗಳಲ್ಲಿ 2 ಮೇಲ್ದವಡೆಯಲ್ಲೂ 2 ಕೆಳದವಡೆಯಲ್ಲೂ ಇವೆ. ಕೋರೆ ಮತ್ತು ಮುಂದವಡೆ ಹಲ್ಲುಗಳು (ಪ್ರೀಮೋಲಾರ್) ಇಲ್ಲ.  ಇದರಿಂದ ಬಾಚಿಹಲ್ಲು ಮತ್ತು ದವಡೆ ಹಲ್ಲುಗಳ (ಮೋಲಾರ್) ಮಧ್ಯೆ ಬಹಳ ಅಂತರವುಂಟು. ಈ ತೆರನ ರಚನೆಯಿಂದಾಗಿ ಬಾಚಿ ಹಲ್ಲುಗಳ ಪೂರ್ಣ ಉಪಯೋಗಕ್ಕೆ, ಆಹಾರವನ್ನು ದವಡೆ ಹಲ್ಲುಗಳ ಕಡೆಗೆ ತಳ್ಳುವುದಕ್ಕೆ ಅನುಕೂಲವಾಗಿದೆ. ಬಾಚಿ ಹಲ್ಲುಗಳ ಮತ್ತು ಬಾಯಿ ಅಂಗುಳಿನ ನಡುವೆ ಮೃದು ಮಡಿಕೆ ಚರ್ಮವುಂಟು. ಹಲ್ಲುಗಳ ಸಂಖ್ಯೆ ಸಾಮಾನ್ಯವಾಗಿ 22 ಕ್ಕಿಂತ ಹೆಚ್ಚಾಗಿಲ್ಲ.  ಆದರೆ ಪೋಬಿಯನ್ ಜಾತಿಯಲ್ಲಿ ಮಾತ್ರ 28 ಹಲ್ಲುಗಳಿವೆ.

ಬಾಚಿ ಹಲ್ಲುಗಳು ಪ್ರಾಣಿ ಜೀವಂತವಾಗಿರುವ ವರೆಗೂ ಬೆಳೆಯುವವು. ಆದರೆ ಗಟ್ಟಿಯಾದ ಪದಾರ್ಥಗಳನ್ನು ಕಡಿಯುವುದರಿಂದಲೂ ಮತ್ತು ಕೆಲವು ವೇಳೆ ಪ್ರಾಣಿಗಳು ಬಾಚಿ ಹಲ್ಲುಗಳನ್ನು ಆಗಾಗ್ಗೆ ಉಜ್ಜುವುದರಿಂದಲೂ ಈ ಹಲ್ಲುಗಳು ದವಡೆಯಿಂದ ಮುಂಚಾಚಿ ಬೆಳೆಯುವುದಿಲ್ಲ.  ಇವುಗಳ ಹೊರಭಾಗ ಒಳಭಾಗ ಜಾಗ್ರತೆ ಸವೆದುಹೋಗಿ ಹಲ್ಲುಗಳು ಯಾವಾಗಲೂ ಉಳಿಯಂತಿರುವವು.
ಅಲ್ಲದೆ ಸಾಮಾನ್ಯವಾಗಿ ಈ ಹಲ್ಲುಗಳು ಪರಸ್ಪರ ಉಜ್ಜವುದರಿಂದ ಅವು ಸವೆದು ಒಂದೇ ಸಮವಾಗಿರುತ್ತವೆ. ಒಂದು ವೇಳೆ ಅವು ಸವೆಯದಿರುವುದೂ ಉಂಟು. ಆಗ ಅವುಗಳ ತುದಿಗಳು ಬೆಳದು ಹಿಂದಕ್ಕೆ ಬಾಗಿ ಸುರಳಿಯಾಕಾರವನ್ನು ತಾಳುವುದುಂಟು. ಹಾಗೆಯೇ ಮೇಲಿನ ಹಲ್ಲುಗಳು ಹಿಂದಕ್ಕೆ ಬಾಗಿ ಮೇಲ್ಮುಖವಾಗಿ ಬೆಳೆದು ಕೆಲವು ಸಲ ಬಾಯಿಯ ಮೇಲ್ಭಾಗವನ್ನು ತೂರಿ ಹೋಗುವುದೂ ಉಂಟು. ಇದೇ ರೀತಿ ಕೆಳ ಹಲ್ಲುಗಳು ಮೂಗಿನ ಮುಂಭಾಗದಲ್ಲಿ ಮೇಲ್ಮುಖವಾಗಿ ಬೆಳೆಯಬಹುದು. ಈ ರೀತಿಯ ಬೆಳವಣಿಗೆಗೆ ಗಾಯ, ಮೆತು ಆಹಾರ ಅಥವಾ ಯಾವುದಾದರೂ ರೋಗ ಕಾರಣವಿರಬಹುದು.  ದವಡೆಹಲ್ಲುಗಳ ಅಗಿಯುವ ಭಾಗದ ರಚನೆ ಬೇರೆ ಬೇರೆ ಜಾತಿ ಮತ್ತು ಪ್ರಬೇದಗಳಲ್ಲಿ ವಿವಿಧ ರೀತಿಯಾಗಿರುವುದರಿಂದ ಈ ಲಕ್ಷಣ ದಂಶಕಗಳ ವರ್ಗೀಕರಣಕ್ಕೆ ಸಹಾಯಕವಾಗಿವೆ. 

ಕೆಲವು ಜಾತಿಯ ದಂಶಕಗಳ ಬಾಯಂಚಿನಲ್ಲಿ ಕೆನ್ನೆಯ ಹೊರಗೆ ಅಥವಾ ಒಳಗೆ ಚೀಲಗಳಿವೆ. ಇವನ್ನು ಒಳಹೊರಗಾಗುವಂತೆ ತಿರುವಿಹಾಕಬಹುದು. ಹೊರ ಚೀಲಗಳು ಮೆದುಗೂದಲಿನಿಂದ ಆವೃತವಾಗಿವೆ. ದಂಶಕಗಳ ನಾಲಿಗೆ ಮೊಟಕಾಗಿದ್ದು ಇದನ್ನು ಬಾಚಿಹಲ್ಲುಗಳಿಂದ ಮುಂಚಾಚಲಾಗುವುದಿಲ್ಲ. ಮುಂಗೈಯಲ್ಲಿ ನಿರ್ದಿಷ್ಟವಾದ ರೇಡಿಯಸ್ ಮತ್ತು ಆಲ್ನ ಮೂಳೆಗಳುಂಟು. ಇವುಗಳ ಸಂದಿಗಳು ಮುಂಗೈಯನ್ನು ಸುಲಭವಾಗಿ ತಿರುವಲು ಸಾಧ್ಯವಾಗುವಂತಿವೆ.  ಮುಂಗಾಲಿನಲ್ಲಿ ಸಾಮಾನ್ಯವಾಗಿ 5 ಬೆರಳುಗಳಿವೆ. ಆದರೆ ಕೆಲವು ಪ್ರಭೇದಗಳಲ್ಲಿ ಹೆಬ್ಬೆಟ್ಟು ಸಣ್ಣದಾಗಿರಬಹುದು ಅಥವಾ ಇಲ್ಲದಿರಬಹುದು. ದಂಶಕಗಳು ಕೈ ಮತ್ತು ಕಾಲುಗಳನ್ನು ಪೂರ್ಣವಾಗಿ ಊರಿ ಚಲಿಸುತ್ತವೆ. ದಂಶಕಗಳ ಜಠರ ಸರಳ ರೀತಿಯ ಸಂಚಿಯಂತೆ ಇಲ್ಲವೇ ಮೆಲಕುಹಾಕುವ ಪ್ರಾಣಿಗಳಲ್ಲಿ ಇರುವಂಥ ಸಂಕೀರ್ಣ ರೀತಿಯ ಚೀಲದಂತೆ ಇರಬಹದು. ಸಾಮಾನ್ಯವಾಗಿ ಶಿಶ್ನದಲ್ಲಿ ಬ್ಯಾಕುಲಮ್ ಎಂಬ ರಚನೆ ಇದೆ. ವೃಷಣಗಳು ಹೊಟ್ಟೆಯ ಕೆಳಭಾಗದ ಕೋಟರದಲ್ಲಿ ಇಲ್ಲವೇ ಉದರ ಭಾಗದಲ್ಲಿ ಸ್ಥಿತವಾಗಿವೆ. ಅನೇಕ ಪ್ರಭೇದಗಳಲ್ಲಿ ಸಂತಾನೋತ್ಪತ್ತಿಯ ಕಾಲದಲ್ಲಿ ಮಾತ್ರ ಹೊಟ್ಟೆಯ ಕೆಳಭಾಗದ ಕೋಟರಕ್ಕೆ ವೃಷಣಗಳು ಇಳಿಯುವವು. ದಂಶಕಗಳ ಮಿದುಳಾಗಲಿ ಜರಾಯುವಾಗಲಿ ವಿಶೇಷ ರೀತಿಯದಲ್ಲ.

ದಂಶಕಗಳ ಕೆಲವು ಜಾತಿಗಳು ಶತ್ರುಗಳಿಂದ ರಕ್ಷಿಸಿಕೊಳ್ಳಲು ಕೆಲವು ಮಾರ್ಪಾಟುಗಳನ್ನು ತೋರುವವು. ಕೆಲವು ಪ್ರಭೇದಗಳ ಬಾಲ ನೀಳವಾಗಿ ಮೃದುವಾಗಿರುವುದರಿಂದ ಬಾಲವನ್ನು ಶತ್ರುಗಳು ಹಿಡಿದಾಗ ಅದು ಕಿತ್ತು ಶತ್ರುಗಳಿಂದ ತಪ್ಪಿಸಿಕೊಳ್ಳಲು ಅನುಕೂಲವಾಗಿದೆ. ಅನಂತರ ಬಾಲ ಕೊಂಚ ಬೆಳೆಯುವುದುಂಟು.  ಇನ್ನು ಕೆಲವು ಪ್ರಭೇದಗಳ ಬಾಲದ ಚರ್ಮ ಹಿಡಿದ ಭಾಗದಿಂದ ಸ್ವಲ್ಪ ಮುಂದಕ್ಕೆ ಕತ್ತಿಯ ಒರೆಯಂತೆ ಸುಲಿದು ಬರುವುದು. ಅನಂತರ ಆ ಭಾಗದಲ್ಲಿ ಉಳಿದುಕೊಂಡಿರುವ ಮಾಂಸ ಮತ್ತು ಮೂಳೆಯನ್ನು ಪ್ರಾಣಿಯೇ ಸ್ವತಃ ಕಡಿದುಹಾಕುತ್ತದೆ.

ದಂಶಕಗಳು ಮನುಷ್ಯನಿಗೆ ಉಪಕಾರಿಗಳೂ ಹೌದು. ಅಪಕಾರಿಗಳೂ ಹೌದು. ಕೀಟಗಳನ್ನೂ ಕಳೆಗಳನ್ನೂ ಹತೋಟಿಯಲ್ಲಿಡಲು ಇವು ಸಹಾಯಕವಾಗಿವೆ. ಕೆಲವು ಪ್ರಾಣಿಗಳ ತುಪ್ಪಳಕ್ಕೆ ಬಹಳ ಬೇಡಿಕೆ ಇದೆ. ಉದಾಹರಣೆಗೆ ಬೀವರ್, ಕಸ್ತೂರಿ ಇಲಿ, ನ್ಯೂಟ್ರಿಯ ಮತ್ತು ಚಿಂಚಿಲ ಮುಂತಾದವುಗಳ ತುಪ್ಪಳ, ಕೆಲವು ಪ್ರಭೇದಗಳು ಜೀವರಾಸಾಯನಿಕ ಸಂಶೋಧನೆಗಳಲ್ಲಿ ತುಂಬ ಉಪಯುಕ್ತವಾಗಿವೆ. ಇಂಥವುಗಳಲ್ಲಿ ಇಲಿ ಮತ್ತು ಗಿನಿ ಹಂದಿಗಳು ಮುಖ್ಯವಾದವು. ಆದರೆ ಅನೇಕ ದಂಶಕಗಳು ಫಸಲುಗಳ ಪಿಡಗುಗಳಾಗಿವೆಯಲ್ಲದೆ ರೋಗಗಳನ್ನು ಉಂಟುಮಾಡುವ ಪರಾವಲಂಬಿ ಜೀವಿಗಳ ಅತೀಥೇಯಗಾಳಗಿಯೂ ಇವೆ. ಇದರಿಂದ ಇವು ಮನುಷ್ಯನ ಶತ್ರುಗಳಾಗಿವೆ. ದಂಶಕಗಳು ವಿಭಿನ್ನ ಪರಿಸರಗಳಿಗೆ  ಹೊಂದಿಕೊಂಡು ಜೀವಿಸಬಲ್ಲ ಸಾಮಥ್ರ್ಯವನ್ನು ಗಳಿಸಿವೆ. ಹೀಗಾಗಿ ಎಲ್ಲೆಲ್ಲೂ ಇವು ಹೇರಳ ಸಂಖ್ಯೆಯಲ್ಲಿ ಕಾಣಸಿಗುತ್ತವೆ.. ಸಾಧಾರಣವಾಗಿ ಇವುಗಳ ಜನನ ದರ ಹೆಚ್ಚು. ಆದ್ದರಿಂದ ಶತ್ರುಗಳ ಹಾವಳಿಯಿಂದಾಗಲೀ ಇವನ್ನು ನಿಯಂತ್ರಿಸಲು ಬಳಸುವ ಉಪಾಯಗಳಿಂದಾಗಲೀ ಇವನ್ನು ಹತೋಟಿಯಲ್ಲಿಡಲು ಸಾಧ್ಯವಾಗದಿರಬಹುದು. ದಂಶಕಗಳ ಪಳೆಯುಳಿಕೆಗಳು ಹೆಚ್ಚಾಗಿ ಸಿಕ್ಕದೆ ಇರುವುದರಿಂದ ಈ ಗಣದ ವಿಕಾಸದ ಬಗ್ಗೆ ಖಚಿತ ವರ್ಗೀಕರಣದ ಬಗೆ ಅರಿಯಲು ಸಾಧ್ಯವಾಗಿಲ್ಲ.

ಈ ಗಣದ 35 ಕುಟುಂಬಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ವಿವರಿಸಿದೆ.

ಸಯೂರಿಡೀ ಕುಟುಂಬ : ಇದರಲ್ಲಿ ಸಾಮಾನ್ಯ ಅಳಿಲು, ಹಾರುವ ಅಳಿಲು, ನೆಲದ ಅಳಿಲು, ಚಿಪ್‍ಮಂಕ್, ಮಾರ್‍ಮಟ್, ಉಡ್‍ಚಕ್, ಪ್ರೈರಿ ಡಾಗ್ ಮುಂತಾದ ಜಾತಿಗಳನ್ನು ಒಳಗೊಂಡಂತೆ 50 ಜಾತಿಗಳಿವೆ. ಆಸ್ಟ್ರೇಲಿಯ, ಮಡಗಾಸ್ಕರ್, ದಕ್ಷಿಣ ಅಮೇರಿಕದ ದಕ್ಷಿಣಭಾಗ, ಅರೇಬಿಯಾದ ಮತ್ತು ಈಜಿಪ್ಟಿನ ಕೆಲವು ಪ್ರದೇಶಗಳನ್ನುಳಿದು ಮಿಕ್ಕೆಲ್ಲ ಭಾಗಗಳ ವಿವಿಧ ಪರಿಸರಗಳಲ್ಲಿ ಇವು ಕಾಣದೊರೆಯುವವು.  ನೆಲ, ಮರ, ಹಾಗೂ ಬಿಲಗಳಲ್ಲಿ ವಾಸಿಸುವವು. 10 ಗ್ರಾಮ್‍ಗಳಿಗಿಂತಲೂ ಕಡಿಮೆ ತೂಕದ ಉಷ್ಣವಲಯದ ಕುಬ್ಜ ಅಳಿಲುಗಳಿಂದ ಹಿಡಿದು 21/2 ಕೆ.ಜಿ. ತೂಗುವ ಮಾರ್‍ಮಟ್‍ಗಳ ವರೆಗೂ ಗಾತ್ರ ವೈವಿದ್ಯವನ್ನು ತೋರುವ ಪ್ರಾಣಿಗಳು ಈ ಕುಟುಂಬದಲ್ಲಿವೆ. ವೃಕ್ಷವಾಸಿಗಳಲ್ಲಿ ರಟೂಫ ಜಾತಿ ಅತಿ ದೊಡ್ಡದು. ಮೂರು ಗೆರೆಗಳಿಂದ ಕೂಡಿದ  ಮರದ ಅಳಿಲು ಪುನಾಂಬ್ಯುಲಸ್ ಜಾತಿಯ ಪು. ಪಾಮೇರಮ್, ಪು. ಟ್ರೈಸ್ಟ್ರಯೇಟಸ್ ಪ್ರಭೇದಗಳು ದಕ್ಷಿಣ ಭಾರತದಲ್ಲೂ ಐದು ಗೆರೆಯ ಫು.ಪೆನ್ನಾಂಬಿ ಪ್ರಬೇದ ಉತ್ತರ ಭಾರತದಲ್ಲೂ  ಇವೆ. ರಟೂಫ ಜಾತಿಯ ರ. ಮ್ಯಾಕ್ರೂರ, ರ. ಇಂಡಿಕ, ಪ್ರಬೇದಗಳು ದಕ್ಷಿಣ ಭಾರತ ಮತ್ತು ಮಧ್ಯ ಪ್ರದೇಶಗಳಲ್ಲಿ ವಾಸಿಸುವವು. ಬಿಲೊಮಿನ್ ಪಿಯರ್‍ಸೋನಿ ಪ್ರಭೇದ. ಮತ್ತು ಡ್ರೆಪ್ರೋಮಿನ್ ಜಾತಿಯ ಅಳಿಲುಗಳು ಅಸ್ಸಾಮಿನಲ್ಲಿ ಕಾಣದೊರೆಯುವವು. ಯುಪೆಟಾರಸ್ ಜಾತಿಯ ತುಪ್ಪಳದ ಹಾರುವ ಅಳಿಲು ಕಾಶ್ಮೀರ ಪ್ರದೇಶದಲ್ಲೂ ಪೆಟನೋಮಿಸ್ ಜಾತಿಯ ಕುಬ್ಜ ಹಾರುವ ಅಳಿಲುಗಳು ಭಾರತದ ಅನೇಕ ದಟ್ಟ ಕಾಡುಗಳಲ್ಲೂ ಜೀವಿಸುತ್ತವೆ.

ಮ್ಯೂರಿಡೀ ಕುಟುಂಬ : ಎಲ್ಲ ಬಗೆಯ ಇಲಿಗಳೂ ಈ ಕುಟುಂಬಕ್ಕೆ ಸೇರಿವೆ. ಇವು ಸಾಮಾನ್ಯವಾಗಿ ಉಷ್ಣ ಮತ್ತು ಸಮಶೀತೋಷ್ಣ ವಲಯದ ಎಲ್ಲ ಪ್ರದೇಶಗಳಲ್ಲೂ ಕಂಡುಬರುವವು. ಆದರೆ ರ್ಯಾಟಸ್ ಮತ್ತು ಮಸ್ ಜಾತಿಯ ಇಲಿಗಳು ಪ್ರಪಂಚಾದ್ಯಂತ ಹರಡಿವೆ. ಇವುಗಳಲ್ಲಿ ಸಾಮಾನ್ಯವಾಗಿ ಒಂದೊಂದು ದವಡೆಯಲ್ಲೂ 8 ಹಲ್ಲುಗಳಿವೆ. ಒಟ್ಟು 16 ಹಲ್ಲುಗಳುಂಟು. ದಂತಸೂತ್ರದಲ್ಲಿ ನಿರೂಪಿಸಿದರೆ ಪ್ರತಿ ದವಡೆಯಲ್ಲಿ, ಬಾಚಿ ಹಲ್ಲು 1/1, ಕೋರೆ ಹಲ್ಲು 0/0 ಮುಂದವಡೆ  ಹಲ್ಲು 0/0, ದವಡೆಹಲ್ಲು 3/3- ಹೀಗೆ ಇವೆ.

ಸಾಮಾನ್ಯವಾಗಿ ಸಸ್ಯ ಪದಾರ್ಥಗಳೇ ಇವುಗಳ ಆಹಾರ. ಕೆಲವು ವೇಳೆ ಅಕಶೇರುಕಗಳನ್ನೂ ಅನಿವಾರ್ಯವಾದಾಗ ಹಲ್ಲಿ, ಹಾವು, ಮೊಟ್ಟೆ ಮತ್ತು ಹಕ್ಕಿಯ ಮರಿಗಳನ್ನೂ ಇವು ತಿನ್ನುವುದುಂಟು.  ಮನುಷ್ಯನ ನಿವಾಸಗಳ ಹತ್ತಿರವಿರುವ ಇಲಿಗಳು ಮಾತ್ರ ಸಾಮಾನ್ಯವಾಗಿ ಎಲ್ಲ ಬಗೆಯ ಆಹಾರವನ್ನು ತಿನ್ನುವವು. ಕೆಲವು ಪ್ರಭೇದಗಳು ಬೆಳೆಗಳನ್ನು ನಾಶ ಮಾಡುವುದಲ್ಲದೆ  ಕೆಲವು ತೆರನ ರೋಗಗಳನ್ನು ಹರಡುವವು. ವ್ಯಾಂಡಲ್ಯೂರಿಯ ಜಾತಿಯ ಒಂದೇ ಪ್ರಭೇದವಾದ ವ್ಯಾ. ಓಲರೇಸಿಯ ಎಂಬುದು ಭಾರತದ ಅನೇಕ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ರೂಢಿಯಲ್ಲಿ ಉದ್ದ ಬಾಲದ ಮರ ಹತ್ತುವ ಇಲಿ ಎಂದು ಕರೆಯಲಾಗುವ ಈ ಇಲಿಯ ಬೆರಳುಗಳ ತುದಿಯಲ್ಲಿರುವ ವಿಶೇಷ ರಚನೆಗಳು ಗಿಡಮರಗಳನ್ನು ಹತ್ತಲು ಸಹಕಾರಿಯಾಗಿವೆ. ಮಿಲ್ಲುರ್ಡಿಯ ಜಾತಿಯ ಮಿ. ಗ್ಲಿಯಡೋವಿ ಮತ್ತು ಮಿ. ಮೇಲ್ಟಾಡ ಪ್ರಬೇದಗಳು ಮನೆಯ ದೊಡ್ಡಿಲಿಗಳನ್ನು ಹೋಲುತ್ತವೆ.

ರ್ಯಾಟಸ್ ಜಾತಿ (ದೊಡ್ಡ ಇಲಿ ಜಾತಿ) ; ಸಸ್ತನಿಗಳಲ್ಲೆಲ್ಲ ಇದು ಅತಿ ದೊಡ್ಡ ಜಾತಿ ; ಇದರಲ್ಲಿ ಸುಮಾರು 570 ಬಗೆಗಳನ್ನು ಗುರುತಿಸಲಾಗಿದೆ.  ಸಾಮಾನ್ಯವಾಗಿ ಪ್ರಪಂಚದ ಎಲ್ಲ ಭಾಗಗಳಲ್ಲೂ ಇವು ವಾಸಿಸುವುದಾದರೂ ಏಷ್ಯ ಮತ್ತು ಆಫ್ರಿಕದ ಉಷ್ಣವಲಯದ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರಭೇಧಗಳಿವೆ.  ಇವು ಬಿಲ, ಕಸದ ರಾಶಿ, ಕಲ್ಲು ಮತ್ತು ಮರದ ದಿಮ್ಮಿಗಳ ಕೆಳಗೆ ವಾಸಿಸುತ್ತವೆ.  ಧಾನ್ಯ, ತರಕಾರಿ, ಹಣ್ಣು, ಮಾಂಸ, ಮೀನು, ಮತ್ತು ಅನೇಕ ಅಕಶೇರುಕ ಪ್ರಾಣಿ ಮುಂತಾದ ಪ್ರಾಣಿ ಹಾಗೂ ಸಸ್ಯಗಳನು ತಿಂದು ಜೀವಿಸುವವು.  ಇವುಗಳ ಬೆಳೆವಣಿಗೆಯ ಕಾಲ ಸಾಮಾನ್ಯವಾಗಿ 21-30 ದಿವಸಗಳು. ಹೆಚ್ಚಿನ ಪ್ರಭೇಧಗಳು ವರ್ಷದಲ್ಲಿ ಅನೇಕ ಸಾರಿ ಮರಿ ಹಾಕುವವು. ಇವುಗಳಿಂದ ಉಪಕಾರಕ್ಕಿಂತ ಅಪಕಾರವೇ ಹೆಚ್ಚು. ಕೋಟ್ಯಂತರ ರೂಪಾಯಿ ಮೌಲ್ಯದ ದವಸ ಧಾನ್ಯಗಳನ್ನು ಧ್ವಂಸ ಮಾಡುವುದರಿಂದ ಇವುಗಳ ಹತೋಟಿ ಮಾನವನ ಮುಖ್ಯ ಸಮಸ್ಯೆಗಳಲ್ಲೊಂದಾಗಿದೆ. ಪ್ಲೇಗ್, ವಿಷಮಶೀತಜ್ವರ, ಮುಂತಾದ ರೋಗಗಳನ್ನು ಹರಡುವ ಹೇನು, ಚಿಗಟೆಗಳು ಇಲಿಗಳ ಪರಾವಲಂಬಿಗಳು. ಆದ್ದರಿಂದ ಈ ರೋಗಗಳ ಪ್ರಸರಣದಲ್ಲೂ ಇಲಿಗಳ ಪಾತ್ರ ಪ್ರಮುಖವಾಗಿವೆ. ಆದರೆ ರ್ಯಾಟಸ್ ನಾರ್ವೀಜಿಕಸ್ ಎಂಬ ಪ್ರಬೇಧದ ಒಂದು ರೂಪವಾದ ಬಿಳಿ ಇಲಿಯನ್ನು ಜೀವಶಾಸ್ತ್ರದ ಅನೇಕ ಪ್ರಯೋಗಗಳಲ್ಲಿ ಅತಿ ಹೆಚ್ಚಾಗಿ ಉಪಯೋಗಿಸಲಾಗುತ್ತಿದೆ. ಭಾರತದಲ್ಲಿ ರ್ಯಾಟಸ್ ರ್ಯಾಟಸ್, ರ್ಯಾ. ಬ್ಲಾನ್‍ಪೋಡಿ, ರ್ಯಾ. ಬ್ರುವಿಯಸ್ ಮತ್ತು ರ್ಯಾ. ಬ್ರುನೆನ್ಕ್ಯಲಸ್ ಪ್ರಬೇಧಗಳು ಕಾಣಸಿಗುತ್ತವೆ. ರ್ಯಾ. ರ್ಯಾಟಸ್‍ನಲ್ಲಿ ಅನೇಕ ಉಪಪ್ರಬೇಧಗಳೂ ಉಂಟು.

	ಮಸ್ ಜಾತಿ (ಸಣ್ಣ ಇಲಿ ಜಾತಿ) :  ಮನೆಯ ಸುಂಡಿಲಿಯೂ (ಮಸ್ ಮಸ್ಕ್ಯುಲಸ್) ಸೇರಿದಂತೆ ಈ ಜಾತಿಯಲ್ಲಿ 16 ಪ್ರಭೇದಗಳಿವೆ.  ಮನೆಯ ಸುಂಡಿಲಿ ಮನುಷ್ಯನ ಮೂಲಕ ಪ್ರಪಂಚದ ಎಲ್ಲ ಪ್ರದೇಶಗಳಿಗೂ ಹರಡಿದೆ.  ಈ ಪ್ರಭೇದದ ಇಲಿಗಳು ಹೊಲ ಗದ್ದೆ ಕಾಡು ಮುಂತಾದ ಸ್ಥಳಗಳಲ್ಲಿ ವಾಸಿಸುವುವು.  ಮನೆ ಸುಂಡಿಲಿ ಮನೆಯಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಎಲ್ಲ ಬಗೆಯ ತಿಂಡಿಗಳನ್ನೂ ತಿನ್ನುವುದು.  ಈ ಇಲಿ ದೊಡ್ಡ ಇಲಿಗಳನ್ನು ಅನೇಕ ಗುಣಗಳಲ್ಲಿ ಹೋಲುವುದಾದರೆ ದವಡೆ ಮತ್ತು ಹಲ್ಲು ರಚನೆ ಹಾಗೂ ಗಾತ್ರಗಳಿಂದ ಇದನ್ನು ಬೇರೆಯಾಗಿ ಗುರುತಿಸಬಹುದು.  ಮಸ್ ಮಸ್ಕ್ಯುಲಸ್, ಮ. ಪ್ಲಾಟಿಥ್ರಿಕ್ಸ್, ಮ. ಬೂದುಗ ಮತ್ತು ಮ. ಡನ್ನಿ-ಇವು ಭಾರತದಲ್ಲಿ ಕಂಡುಬರುವ ಸಾಮಾನ್ಯ ಪ್ರಭೇದಗಳು.

	ಬ್ಯಾಂಡಿಕೂಟ ಜಾತಿ :  ಈ ಜಾತಿಯಲ್ಲಿ ಬ್ಯಾಂಡಿಕೂಟ ಇಂಡಿಕ, ಬ್ಯಾ. ಬೆಂಗಾಲೆನ್ಸಿಸ್ ಪ್ರಭೇದಗಳಿವೆ.  ಇವು ಉದ್ದವಾದ ಸುರಂಗ ರೀತಿಯ ಬಿಲಗಳನ್ನು ನಿರ್ಮಿಸುವುವು.  ಸಾಮಾನ್ಯವಾಗಿ ಒಂದು ಬಿಲದಲ್ಲಿ ಒಂದು  ಪ್ರಾಣಿ ಇರುತ್ತದೆ.  ಬಿಲದ ಕವಲುಗಳಲ್ಲಿ ಕಾಳು, ಗೆಡ್ಡೆ, ಹಣ್ಣುಗಳನ್ನು ಸಂಗ್ರಹಿಸುವುವು.  ಬಹು ಕ್ರೂರ ಸ್ವಭಾವವುಳ್ಳ ಪ್ರಾಣಿಗಳು ಇವು.  ಶತ್ರುಗಳಿಂದ ಸುತ್ತುವರಿಯಲ್ಪಟ್ಟಾಗ ಹಿಂಜರಿಯದೇ ಕರ್ಕಶವಾಗಿ ಶಬ್ದ ಮಾಡುತ್ತ ಎದುರಿಸುತ್ತವೆ.  ಬ್ಯಾ. ಇಂಡಿಕವೇ ಹಂದಿ ಹೆಗ್ಗಣ.  ಮನುಷ್ಯನ ನಿವಾಸದ ಚರಂಡಿ, ಹಿತ್ತಿಲು, ಮತ್ತಿತರ ಕೊಳಕು ಪ್ರದೇಶಗಳಲ್ಲಿಯೂ ಉಗ್ರಾಣಗಳಲ್ಲಿಯೂ ವಾಸಿಸುವುವು.  ಇವುಗಳ ಕೂದಲು ಒರಟು.  ಹಲ್ಲುಗಳು ಬಲವಾಗಿವೆ.  ಬ್ಯಾ. ಬೆಂಗಾಲೆನ್ಸಿಸ್ ಪ್ರಭೇದಕ್ಕೆ ಹೊಲದಿಲಿ ಅಥವಾ ತೋಡ ಎಂಬ ಸಾಮಾನ್ಯ ಹೆಸರುಂಟು.  ಸಾಧಾರಣವಾಗಿ ಹೊಲ, ಗದ್ದೆ ಅಥವಾ ಮೈದಾನಗಳಲ್ಲಿ ಇವುಗಳ ವಾಸ, ರಾಗಿ, ಭತ್ತ ಗೆಡ್ಡಗಳು ಇವುಗಳ ಆಹಾರ.  ಇವು ಕೂಡ ಆಹಾರವನ್ನು ಶೇಖರಿಸುತ್ತವೆ.  ಇದರ ಮಾಂಸ ಆರೋಗ್ಯಕ್ಕೆ ಒಳ್ಳೆಯದೆಂದು ತಿನ್ನುವುದುಂಟು.  ಇದು ಬೇಸಾಯದ ಸಸ್ಯಗಳಿಗೆ ಬಲು ಉಪದ್ರವಕಾರಿ.

	ಗೋಲುಂಡ ಜಾತಿ :  ಈ ಇಲಿಗಳನ್ನು ಭಾರತದ ಪೊದೆ ಇಲಿಗಳು ಎನ್ನುವರು.  ಈ ಜಾತಿಯ ಒಂದೇ ಪ್ರಭೇದವಾದ ಗೊ. ಎಲ್ಲಿಯೊಟಿ ಭಾರತದ ಕೆಲವು ಪ್ರದೇಶಗಳಲ್ಲಿ ಕಾಣಸಿಗುತ್ತದೆ.  ಹುಲ್ಲುಗಾವಲು, ಪೊದೆ ಮುಂತಾದ ಕಡೆ ವಾಸಿಸುವುದು. ಅಪರೂಪವಾಗಿ ಬಿಲದಲ್ಲಿ ವಾಸಿಸುವುದುಂಟು.  ಸಾಮಾನ್ಯವಾಗಿ ಒತ್ತಾದ ಹುಲ್ಲಿನ ಅಥವಾ ಇತರ ಸಸ್ಯಗಳ ನಾರಿನಿಂದ ನೆಲದ ಮೇಲೆ ಅಥವಾ ಸ್ವಲ್ಪ ಎತ್ತರದಲ್ಲಿ ಗೂಡನ್ನು ನಿರ್ಮಿಸುವುವು.

ಹಿಸ್ಟ್ರಿಸಿಡೀ ಕುಟುಂಬ (ಮುಳ್ಳು ಹಂದಿಯ ಕುಟುಂಬ) :  ಇದರಲ್ಲಿ 4 ಜಾತಿ ಮತ್ತು 20 ಪ್ರಭೇದಗಳಿವೆ ; ಹಿಸ್ಟ್ರಿಕ್ಸ್ ಜಾತಿ ಮುಖ್ಯವಾದ್ದು.  ಈ ಜಾತಿಯ ಪ್ರಾಣಿಗಳ ದೇಹ ಮತ್ತು ಬಾಲಗಳೆ ಮೇಲೆ ಉದ್ದವಾದ ಚೂಪಾದ ಮುಳ್ಳುಗಳಂಥ ಕೂದಲುಗಳುಂಟು.  ಒಂದೊಂದು ಮುಳ್ಳೂ ಸುಮಾರು 350 ಮುಳ್ಳುಗಳಂಥ ಕೂದಲುಗಳುಂಟು.  ಒಂದೊಂದು ಮುಳ್ಳೂ ಸುಮಾರು 350ಮಿ.ಮೀ. ಇರುವುದು.
(ಎನ್.ವಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ